ಅರಣ್ಯ ಗಸ್ತು ಪಾಲಕ ದಿ.ಸುಂದರೇಶ್ ಹಾಗೂ ಗಾಯಗೊಂಡಿದ್ದ ಮಂಜುನಾಥ್ ಗೆ ಮುಖ್ಯಮಂತ್ರಿಗಳ ಪದಕಕ್ಕೆ ಶಿಫಾರಸ್ಸು.
ಬೆಂಗಳೂರು : ಕರ್ನಾಟಕ ಅರಣ್ಯ ಇಲಾಖೆಯಲ್ಲಿ2022-23 ಸಾಲಿನಲ್ಲಿ ಅರಣ್ಯ ಸಂರಕ್ಷಣೆ, ಅಕ್ರಮ ಕಡಿತಲೆ, ವನ್ಯಜೀವಿ ಸಂರಕ್ಷಣೆ, ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳ ಮೂಲಕ ಸಾಧನೆ ಮಾಡಿದ ಅಧಿಕಾರಿ-ಸಿಬ್ಬಂದಿಗಳನ್ನು ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಅರಣ್ಯ ಸಂರಕ್ಷಣೆಗಾಗಿ ಸಕಲೇಶಪುರ ಅರಣ್ಯ ವಲಯದಲ್ಲಿ ಗಸ್ತು ಪಾಲಕರಾಗಿ ಕಾರ್ಯನಿರ್ವಹಿಸುವ ವೇಳೆ ಬೆಂಕಿಯ ಕೆನ್ನಾಲಿಗೆ ಬಲಿಯಾದ ಸುಂದರೇಶ್ ಹಾಗೂ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಉಪ ವಲಯ ಅರಣ್ಯಧಿಕಾರಿ -ಕಂ -ಮೋಜಣಿದಾರ ಮಂಜುನಾಥ್ ರವರನ್ನು ಮುಖ್ಯಮಂತ್ರಿಗಳ ಪದಕಕ್ಕೆ ಅರ್ಹರೆಂದು ಪರಿಗಣಿಸಿ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ..
ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿಯ ಅರಣ್ಯದಲ್ಲಿ ಗುರುವಾರ ಕಾಡ್ಗಿಚ್ಚು ನಂದಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ್ ಸುಂದರೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು .
ಅರಣ್ಯಾಧಿಕಾರಿಗಳಾದ ಮಂಜುನಾಥ್, ಗಾರ್ಡ್ ಗಳಾದ ಸುಂದರೇಶ್ ಮತ್ತು ತುಂಗೇಶ್ ಅವರು ಕಾಡ್ಗಿಚ್ಚು ನಂದಿಸುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ 80 ರಷ್ಟು ಸುಟ್ಟ ಗಾಯಗಳಾಗಿದ್ದ ಸುಂದರೇಶ್ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅದಕ್ಕಾಗಿಯೇ ಝೀರೋ ಟ್ರಾಫಿಕ್‌ನಲ್ಲಿ ಸುಂದರೇಶ್ ಹಾಗೂ ಮಂಜುನಾಥ ಅವರನ್ನು ಬೆಂಗಳೂರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಸುಂದರೇಶ್, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಇದೀಗ ಮುಖ್ಯಮಂತ್ರಿಗಳ ಪದಕಕ್ಕೆ 25 ಜನ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳ ಆಯ್ಕೆ ಪಟ್ಟಿಯಲ್ಲಿ ಸುಂದರೇಶ್ ಹಾಗೂ ಮಂಜುನಾಥ್ ರವರನ್ನು ಆಯ್ಕೆ ಮಾಡಲಾಗಿದೆ.