ತಾಲೂಕು ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ: ಬಿಜೆಪಿ ಕಾರ್ಯಕರ್ತರ ಬೆಂಬಲ ಎನ್.ಡಿ.ಎ ಅಭ್ಯರ್ಥಿಗೆ: ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್
ಸಕಲೇಶಪುರ: ತಾಲೂಕು ಬಿಜೆಪಿಯಲ್ಲಿ ಯಾವುದೆ ರೀತಿಯ ಗೊಂದಲಗಳಿಲ್ಲ ಪಕ್ಷದ ಹೈಕಮಾಂಡ್ ಆದೇಶದಂತೆ ಪ್ರತಿಯೋರ್ವ ಕಾರ್ಯಕರ್ತರು ಎನ್.ಡಿ.ಎ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಹೇಳಿದರು.
ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಸುದ್ದಿಗಾರರೊಂದಿಗೆ ಮಾತನಾಡಿ, ಮತ್ತೊಮ್ಮೆ ಮೋದಜೀರವರನ್ನು ಪ್ರಧಾನಿಮಾಡುವ ಉದ್ದೇಶದಿಂದ ಈಗಾಗಲೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ ಮಾಡಲಾಗಿದೆ. ತಾಲೂಕು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ತಮ್ಮಲ್ಲಿನ ಅಸಮಾಧಾನ ಮರೆತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಬೂತ್ ಮಟ್ಟದಲ್ಲಿ ಪ್ರಚಾರ ನಡೆಸುವ ಮೂಲಕ ಶ್ರಮಿಸಲಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಜಿದ್ದಾಜಿದ್ದಿ ಇದೆ. ಆದ್ದರಿಂದ, ಎರಡು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಹೋಗುವುದು ಅಸಂಭವ ಆದ್ದರಿಂದ ಗ್ರಾ.ಪಂ ಮಟ್ಟದ ಮುಖಂಡರಿಗೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡ ಬೇಕು ಇದರಿಂದ ಎರಡು ಬಾರಿ ಒಂದು ಮನೆಗೆ ಭೇಟಿ ನೀಡಿದಂತಾಗುತ್ತದೆ ಎಂದರು. ಯಾರಿಗೆ ಎಂತಹ ಅಸಮಾಧಾನವಿದ್ದರು ಸಹ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಕಾರ್ಯಕರ್ತರು ಮತ ಹಾಕುವುದಿಲ್ಲ. ಎನ್.ಡಿ.ಎ ಅಭ್ಯ ರ್ಥಿಯನ್ನು ಗೆಲ್ಲಿಸಲು ಪ್ರತಿಯೋರ್ವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಾರೆ ಎಂದರು.