ಮೂಲಭೂತ ಸೌಕರ್ಯಕ್ಕೆ ಅಗ್ರಹಿಸಿ ಪ್ರತಿಭಟನೆ.
ಸಕಲೇಶಪುರ ಉಪ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಧರಣಿ.
ಸಕಲೇಶಪುರ : ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹೆಬ್ಬಸಾಲೆ ಗ್ರಾಮದ ಸ.ನಂ.241ರ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಆದಿದ್ರಾವಿಡ ಜನಾಂಗದವರಿಗೆ ಮೂಲಭೂತ ಸೌಲಭ್ಯ ನೀಡುವಂತೆ ಅಗ್ರಹಿಸಿ ಗುರುವಾರ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನೆಡೆಸಿದ ಘಟನೆ ನೆಡೆಯಿತು.
ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ಸರ್ವೆ ಕಾರ್ಯ ನಡೆಸಿಕೊಡದೆ ನಿರ್ಲಕ್ಷ್ಯ ದೋರಣೆಯನ್ನು ಅನುಸರಿಸುತ್ತಿರುವ ಅಧಿಕಾರಿಗಳ ವರ್ತನೆಯನ್ನು ವಿರೋಧಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆಯ ಮೂಲಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಿರುವುದಾಗಿ ಆದಿ ದ್ರಾವಿಡ ತುಳು ಸೇವಾ ಸಮಾಜದ ಜಿಲ್ಲಾಧ್ಯಕ್ಷ ಬಿ. ಶಂಕರ್ ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು,
ತಾಲ್ಲೂಕು, ಕಸಬಾ ಹೋಬಳಿ, ಹೆಬ್ಬಸಾಲೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೆಬ್ಬಸಾಲೆ ಗ್ರಾಮದ ಸ.ನಂ.241ರಲ್ಲಿ ಪರಿಶಿಷ್ಟ ಜಾತಿ ಆದಿದ್ರಾವಿಡ ಜನಾಂಗದ 22 ಕುಟುಂಬಗಳು ಕಳೆದ ಕೆಲವು ವರ್ಷಗಳಿಂದ ವಾಸಕ್ಕೆ ಶೆಡ್‌ಗಳನ್ನು ನಿರ್ಮಿಸಿಕೊಂಡು, ಕುಟುಂಬ ಸಮೇತ ವಾಸಮಾಡಿಕೊಂಡು ಬಂದಿದ್ದಾರೆ.
ಆದರೆ ಇಲ್ಲಿನ ವಾಸಿಗಳ ವಸತಿ ಪ್ರದೇಶಕ್ಕೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯವನ್ನು ಒದಗಿಸಿಕೊಡುವಂತೆ ಹಾಗೂ ವಸತಿ ಪ್ರದೇಶದ ಸರ್ವೆ ಕಾರ್ಯ ನಡೆಸಿ, ವಾಸದ ಮನೆಗಳಿಗೆ ಯಾವುದೇ ತೊಂದರೆಯಾಗದಂತೆ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಅಲ್ಲಿನ ವಾಸಿಗಳು ಮತ್ತು ನಮ್ಮ ಸಂಘದ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರವಾಗಿ ಮನವಿಪತ್ರಗಳನ್ನು ನೀಡುತ್ತಾ ಬಂದರೂ ಸಹ, ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯಧೋರಣೆಯನ್ನು ಅನುಸರಿಸಿಕೊಂಡು ಬಂದಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ತಾರಾತಮ್ಯ ದೋರಣೆಯನ್ನು ಖಂಡಿಸುತ್ತೇವೆ.ಇಲ್ಲಿನ ವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಿಕೊಡಬೇಕು. ವಸತಿ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಸಂಪರ್ಕವನ್ನು ಕಲ್ಪಿಸಿಕೊಡಬೇಕು.ಇ ವಸತಿ ಪ್ರದೇಶದ ಸರ್ವಕಾರ್ಯ ನಡೆಸಿ, ವಾಸವಾಗಿರುವ ಕುಟುಂಬದವರಿಗೆ ಹಕ್ಕುಪತ್ರ ನೀಡಲು ಮುಂದಾಗಬೇಕು.
ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡಲು ವಿಫಲವಾಗಿರುವ ಹೆಬ್ಬಸಾಲೆ ಗ್ರಾ.ಪಂ. ಪಿ.ಡಿ.ಓ. ರವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.ಸರ್ವೆಕಾರ್ಯಕ್ಕಾಗಿ ದಿನಾಂಕ 17.11.2023ರಂದೇ ಅರ್ಜಿ ಸಲ್ಲಿಸಿದ್ದರೂ ಅಳತೆಕಾರ್ಯ ನಡೆಸಲು ಬಾರದ ಸರ್ವೆಯರ್ ಮತ್ತು ಸಹಕರಿಸದ ಹೆಬ್ಬಸಾಲೆ ವೃತ್ತದ ಗ್ರಾಮಲೆಕ್ಕಾಧಿಕರಿಯ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ವಾಸಿಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸಬಾರದೆಂದು ಪಂಚಾಯಿತಿ ಸಭೆಯಲ್ಲಿ ಒತ್ತಾಯ ಮಾಡುತ್ತಿರುವ ಹೆಬ್ಬಸಾಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ್‌ಶೆಟ್ಟಿಯ ಮೇಲೆ ಪ.ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ನಿವಾಸಿ ಶಾಂತ ಮಾತನಾಡಿ, ಕಳೆದ ಮೂರು ವರ್ಷದಿಂದ ನಾವು ಇಲ್ಲಿ ವಾಸ ಮಾಡಿಕೊಂಡು ಬಂದಿದ್ದೇವೆ. ಆದರೆ ನಮಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಮೀನ ಮೇಷ ಎಣಿಸುತ್ತಿರುವುದು ವಿಪರ್ಯಾಸ. ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ವೇಳೆ ಹೆಣ್ಣು ಮಕ್ಕಳು ತಿರುಗಾಡಲು ಭಯಪಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಈ ಸಂಧರ್ಭದಲ್ಲಿ ಆದಿ ದ್ರಾವಿಡ ಸೇವಾ ಸಮಾಜದ ತಾಲೂಕು ಅಧ್ಯಕ್ಷ ನಾರಾಯಣ, ಉಪಾಧ್ಯಕ್ಷ ಉಮೇಶ್, ಜಿಲ್ಲಾ ಸಂಘದ ಕಾರ್ಯದರ್ಶಿ ರುಕ್ಮ ,ಜಿಲ್ಲಾ ಕಮಿಟಿ ಸದಸ್ಯ ಸೋಮಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


                                    
