ಸಕಲೇಶಪುರ : ಕನ್ನಡದಲ್ಲಿ ನಾಮಫಲಕ ಕಡ್ಡಾಯಕ್ಕೆ ಕರವೇ ಆಗ್ರಹ
ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿ ನಾಮಫಲಕ ಕಡ್ಡಾಯಗೊಳಿಸುತ್ತಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ.
ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ, ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಹಾಕದವರ ಪರವಾನಿಗೆ ರದ್ದುಪಡಿಸಿ, ಎಲ್ಲೆಡೆ ಕನ್ನಡದಲ್ಲಿ ನಾಮಫಲಕ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಘಟಕದಿಂದ ತಹಸೀಲ್ದಾರ್ ಕೆ.ಪುರಂದರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷ ರಮೇಶ್ ಪೂಜಾರಿ ‘ವಾಣಿಜ್ಯ ಸಂಕಿರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ಬದಲು ಅನ್ಯ ಭಾಷೆಯ ನಾಮಫಲಕ ಹಾಕಲಾಗಿದೆ. ಇನ್ನೂ ಕೆಲವಡೆ ನಮ್ಮ ಮಾತೃಭಾಷೆ ಹಾಗೂ ಆಡಳಿತ ಭಾಷೆಯಾದ ಕನ್ನಡವನ್ನು ಸಣ್ಣ ಪ್ರಮಾಣದಲ್ಲಿ ಹಾಕಿಕೊಂಡು, ಅನ್ಯ ಭಾಷೆಯ ನಾಮಫಲಕವನ್ನು ದೊಡ್ಡದಾಗಿ ಕಾಣುವಂತೆ ಹಾಕಿದ್ದಾರೆ’ ಎಂದು ಆರೋಪಿಸಿದರು. ತಾಲೂಕು ದಂಡಾಧಿಕಾರಿಗಳು ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿ ಎಲ್ಲೆಡೆ ಕಡ್ಡಾಯವಾಗಿ ಕನ್ನಡದ ನಾಮಫಲಕ ಅಳವಡಿಸುವಂತೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು. ಒಂದು ವೇಳೆ ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಬಳಿಕ ತಹಸೀಲ್ದಾರ್ ಮಾತನಾಡಿ,‘ನಿಯಮ ಪಾಲಿಸದ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವೆ’ ಎಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಕಾರ್ಯದರ್ಶಿ ರವಿ ಅಗ್ನಿ ಉಪಾಧ್ಯಕ್ಷರು ನವೀನ್ ಮಾರ್ನಳ್ಳಿ, ರಾಜೇಶ್ ಸಹ ಕಾರ್ಯದರ್ಶಿ ಬಸವರಾಜ್ ಬೆಳಗೋಡು ಬೆಳಗೋಡುಅಧ್ಯಕ್ಷ ರಮೇಶ್ ಆಚಂಗಿ ಇಬ್ರಾಹಿಂ ಲಕ್ಷ್ಮಣ ಲೋಹಿತ್ ಧರ್ಮರಾಜ್ ಉಮಾರ್ ನಾಗಶ್ ಸ್ಟುಡಿಯೋ ಜನಾರ್ಧನ್ ಆಚಾರಿ ಯುವ ಘಟಕದ ಅಧ್ಯಕ್ಷ ಕಿರಣ್ ಶಶಿಧರ್ ಸುರೇಶ್ ಮುಂತಾದವರು ಇದ್ದರು