ಸಕಲೇಶಪುರ: ಎಸ್‌ವೈಎಸ್ ಹಾಸನ ಜಿಲ್ಲಾ ಸಮಿತಿ ವತಿಯಿಂದ ಜಾತ್ಯಾತೀತತೆ ಭಾರತದ ಧರ್ಮ ಎಂಬ ಘೋಷಣೆಯೊಂದಿಗೆ ಆ.೧೫ ರಂದು ಸುಂಡೆಕೆರೆಯಲ್ಲಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಯೂಸುಫ್ ಸುಂಡೆಕೆರೆ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 15ರಂದು ಸುಂಡೆಕೆರೆ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನೌಶಾದ್ ಫೈಝಿ ಉದ್ಘಾಟಿಸಲಿದ್ದು, ಸಂಘಟನೆಯ ಗೌರವ ಅಧ್ಯಕ್ಷ ಪೋಕರ್ ಹಾಜಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಯಡೆಹಳ್ಳಿ ಮಂಜುನಾಥ್ ಭಾಗವಹಿಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಜಾತಿ, ಧರ್ಮದ ಹೆಸರಿನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದು ಬೇಸರದ ವಿಚಾರವಾಗಿದೆ. ಜಾತ್ಯತೀತತೆಯನ್ನು ಉಳಿಸುವ ಮೂಲಕವೇ ಸುಂದರ ಭಾರತದ ನಿರ್ಮಾಣ ಸಾಧ್ಯ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಎಸ್‌ವೈಎಸ್ ಹಾಸನ ಜಿಲ್ಲಾ ಸಮಿತಿಯು ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಉತ್ತಮ ಬಾಂಧವ್ಯವನ್ನು ಮತ್ತು ಸಹಬಾಳ್ವೆಯನ್ನು ಮೂಡಿಸುವ ಕೆಲಸವನ್ನು ಕಾರ್ಯಕ್ರಮದ ಮೂಲಕ ಮಾಡಲಾಗುತ್ತದೆ ಎಂದರು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಂಡರು