ಸಕಲೇಶಪುರ: ತಾಲೂಕಿನ ದೇವಾಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಚ್ಚನಹಳ್ಳಿ ಗ್ರಾಮದ ಸಮೀಪ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮನೆ ಹಾಗೂ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಮೇಲೆ ಬೆಂಗಳೂರಿನಿಂದ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಮಂದಿಯ ತಂಡ ದಾಳಿ ನಡೆಸಿ ಸ್ಟೋನ್ ವ್ಯಾಲಿ ರೆಸಾರ್ಟ್ ಹಾಗೂ ಮಾಲಿಕರ ವಾಸದ ಮನೆಗೆ ಬೀಗ ಜಡಿದಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೆ ವನಗೂರು ಸಮೀಪ ರೆಸಾರ್ಟ್ ವೊಂದಕ್ಕೆ ಅರಣ್ಯ ಇಲಾಖೆ ಬೀಗ ಜಡಿದಿತ್ತು. ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ ಪರಿಣಾಮ ರೆಸಾರ್ಟ್ ಮಾಲಿಕರು ತಮ್ಮ ಕುಟುಂಬ ವರ್ಗ ಹಾಗೂ ಸಿಬ್ಬಂದಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಅನಿವಾರ್ಯತೆಗೆ ಸಿಲುಕಿದರು. ಅಲ್ಲದೆ ಸಿಸಿ ಟಿವಿ ಸಂಪರ್ಕಗಳನ್ನು ಕಿತ್ತು ಹಾಕಿದ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ರೆಸಾರ್ಟ್ ಪರಿಶೀಲನೆ ನಡೆಸಿ ಬೀಗ ಜಡಿದಿದ್ದಾರೆ. ಸುಮಾರು 20ಕ್ಕೂ ಹೆಚ್ಚು ರೆಸಾರ್ಟ್ ಹಾಗೂ ಹೋಂಸ್ಟೇಗಳು ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿದ್ದು ಆದರೆ ಕೇವಲ ಒಂದೆ ಒಂದು ರೆಸಾರ್ಟ್ ವಿರುದ್ದ ಕ್ರಮ ಕೈಗೊಂಡಿರುವುದು ಹಲುವು ಅನುಮಾನಗಳಿಗೆ ಕಾರಣವಾಗಿದೆ. ಇದೀಗ ಅರಣ್ಯ ಇಲಾಖೆ ಈ ರೀತಿ ರೆಸಾರ್ಟ್ ಹಾಗೂ ಮನೆಗೆ ಬೀಗ ಜಡಿದಿರುವುದು ಹಲವು ರೆಸಾರ್ಟ್ ಹಾಗೂ ಹೋಂಸ್ಟೇ ಮಾಲಿಕರ ಆತಂಕಕ್ಕೆ ಕಾರಣವಾಗಿದೆ. ಒಂದೆಡೆ ಅರಣ್ಯ ಇಲಾಖೆ ವಿರುದ್ದ ಶಾಸಕ ಸಿಮೆಂಟ್ ಮಂಜು ಸದನದಲ್ಲಿ ಆಕ್ರೋಷ ವ್ಯಕ್ತಪಡಿಸಿದ ಮಾರನೇ ದಿನವೇ ಈ ರೀತಿಯ ಘಟನೆ ನಡೆದಿರುವುದು ಆತಂಕಕಾರಿಯಾಗಿದೆ.