ಹಿಂದೂ ಮುಖಂಡ ರಘು ಸಕಲೇಶಪುರರವರಿಗೆ ಜಾಮೀನು ಮಂಜೂರು ಮಾಡಿದ ಜಿಲ್ಲಾ ನ್ಯಾಯಾಲಯ
ಸಕಲೇಶಪುರ: ದ್ವೇಷ ಭಾಷಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ರಘು ಸಕಲೇಶಪುರ ರವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು ಇದರಿಂದಾಗಿ ಪೋಲಿಸರ ಬಂಧನಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಂಡಿದ್ದಾರೆ.
ಘಟನೆ ವಿವರ: ತಾಲೂಕಿನ ಕ್ಯಾಮನಹಳ್ಳಿ ಸೇರಿದಂತೆ ಸುತ್ತಮುತ್ತಲು ವ್ಯಾಪಕ ಗೋಹತ್ಯೆ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಗಿತ್ತು.ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರೆಂಬ ಆರೋಪದ ಮೇಲೆ ರಘು ಸಕಲೇಶಪುರ ಸೇರಿದಂತೆ ಸಂಘಟನೆಯ ಕೆಲವು ಮುಖಂಡರನ್ನು ಜುಲೈ 1 ರ ರಾತ್ರಿ ಪೋಲಿಸರು ಬಂಧಿಸಲು ಮುಂದಾಗಿದ್ದರು. ರಘು ಸಕಲೇಶಪುರ ಈ ಸಂಧರ್ಭದಲ್ಲಿ ಪೋಲಿಸರಿಗೆ ಸಿಗದಂತೆ ಪರಾರಿಯಾಗಿದ್ದರು. ರಘು ಸಿಗದ ಹಿನ್ನೆಲೆಯಲ್ಲಿ ಪೋಲಿಸರು ವಿಚಾರಣೆ ಹೆಸರಿನಲ್ಲಿ ಹಲವು ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಮುಂದಾಗಿದ್ದಲ್ಲದೆ ಮೂಡಿಗೆರೆ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅವಿನಾಶ್ ರವರನ್ನು ರಘು ಸಂಪರ್ಕಿಸಿದ್ದರೆಂಬ ಹಿನ್ನೆಲೆಯಲ್ಲಿ ಪೋಲಿಸರು ಅವರನ್ನು ಬಂಧಿಸಿ ಸಕಲೇಶಪುರ ಗ್ರಾಮಾಂತರ ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದರೆಂಬ ಆರೋಪ ಕೇಳಿ ಬಂದಿದ್ದರಿಂದ ಪೋಲಿಸರ ವಿರುದ್ದ ಹಲವು ಪ್ರತಿಭಟನೆಗಳು ನಡೆದಿದ್ದವು.ರಾಜ್ಯಾದ್ಯಂತ ಈ ಪ್ರಕರಣ ಸದ್ದು ಮಾಡಿದ್ದು ಹಿಂದೂ ಕಾರ್ಯಕರ್ತರ ಆಕ್ರೋಷಕ್ಕೆ ಕಾರಣವಾಗಿತ್ತು.