ಸಕಲೇಶಪುರ : ತಿಂಗಳ ಬಳಿಕ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆಯ ಆರ್ಭಟ ಆರಂಭವಾಗಿದ್ದು, ಗಾಳಿ-ಮಳೆಗೆ ಮನೆಗಳಿಗೆ ಹಾನಿಯಾಗಿದ್ದು, ಹತ್ತಾರು ಮರಗಳು ಧರೆಗುರುಳಿವೆ.
ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಹಾನುಬಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ಪರಮೇಶ್-ಕಮಲಾ ಎಂಬ ವೃದ್ಧ ದಂಪತಿಯ ಮನೆಯೊಂದರ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದ್ದು, ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲ್ಲೂಕಿನೆಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹೇಮಾವತಿ ನದಿ ನೀರಿನ ಮಟ್ಟ ತುಸು ಏರಿಕೆ ಕಂಡಿದೆ. ಹೆತ್ತೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಾದ ಬಾಳೆಹಳ್ಳ, ಮಂಕನಹಳ್ಳಿ, ಹೊಂಗಡಹಳ್ಳ, ಪಾಲಹಳ್ಳಿ, ಹಿರದನಹಳ್ಳಿ, ಮಾಗೇರಿ, ಬಿಸ್ಲೆ, ಹುದಿನೂರುನಲ್ಲಿ ಮುಂಜಾನೆ ಆರಂಭವಾದ ಜಿಟಿಜಿಟಿ ಮಳೆ ಮಧ್ಯಾಹ್ನದ ನಂತರ ಬಿರುಸು ಪಡೆಯಿತು. ಮಳೆಗಾಳಿಗೆ ಹೆತ್ತೂರು ಸಮೀಪದ ಬನ್ನಹಳ್ಳಿ ಗ್ರಾಮದ ಸೋಮಶೇಖರ್ ಎಂಬುವರ ಮನೆ ತಡೆ ಗೋಡೆ ಕುಸಿದು ಬಿದ್ದಿದೆ.
ತಾಲ್ಲೂಕಿನ ಹುಲ್ಲಹಳ್ಳಿ ಸಮೀಪ ರಸ್ತೆ ಬದಿಯ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಹುಲ್ಲಹಳ್ಳಿ ಸುತ್ತಮುತ್ತ ಬುಧವಾರ ಮುಂಜಾನೆಯಿಂದಲೇ ವಿದ್ಯುತ್ ಪೂರೈಕೆ ಇಲ್ಲದೆ ಗ್ರಾಮಸ್ಥರು ಪರದಾಡಿದರು.