ಸಾಮಾಜಿಕ ಜಾಲತಾಣಗಳಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ: ಸುಪ್ರೀಂ
ನವದೆಹಲಿ : ಸೋಷಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
ಈ ಸಂಬಂಧ ಕೃಷ್ಣ ಕುಮಾರ್ ರಘುವಂಶಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ರಜಾಕಾಲದ ಪೀಠವು, ಈ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಇಷ್ಟಪಡುವುದಿಲ್ಲ ಎಂದು ಹೇಳಿ, ಮನವಿಯನ್ನು ತಿರಸ್ಕರಿಸಿತು.
ಸಾಮಾಜಿಕ ಮಾಧ್ಯಮಗಳ ಮೂಲಕ ಯಾರೊಬ್ಬರೂ ನ್ಯಾಯಾಧೀಶರನ್ನು ದೂಷಣೆ ಮಾಡುವಂತಿಲ್ಲ ಅಥವಾ ಅಪವಾದ ಹೊರಿಸುವಂತಿಲ್ಲ. ನಿಮ್ಮ ಪರ ತೀರ್ಪು ಬಾರದಿದ್ದಾಗ ನೀವು ನ್ಯಾಯಾಧೀಶರನ್ನು ದೂಷಿಸಬಹುದು ಎಂದರ್ಥವಲ್ಲ. ನ್ಯಾಯಾಂಗದ ಸ್ವಾತಂತ್ರ್ಯವೆಂದರೆ ಕೇವಲ ಕಾರ್ಯಾಂಗದಿಂದ ಸ್ವತಂತ್ರವಾಗಿರುವುದಲ್ಲ. ಹೊರಗಿನ ಶಕ್ತಿಗಳಿಂದಲೂ ಸ್ವತಂತ್ರವಾಗಿರುವುದಾಗಿದೆ. ಇದು ಇತರರಿಗೆ ಪಾಠವಾಗಬೇಕು’ ಎಂದು ಪೀಠ ಎಚ್ಚರಿಸಿದೆ