ಬೆಂಗಳೂರು, ಅಕ್ಟೋಬರ್ 13: ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಲಕ್ಷಣಗಳು ಕಂಡು ಬಂದಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವೆಡೆ ಮಳೆ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮಳೆ ಒಂದು ಭಾಗದಲ್ಲಿ ಎರಡರಿಂದ ಮೂರು ದಿನ ಸುರಿದರೆ ಮರು ದಿನದಿಂದ ಮತ್ತೆ ಬೇರೆ ಭಾಗದ ಜಿಲ್ಲೆಗಳಲ್ಲಿ ಅಬ್ಬರ ಶುರು ವಿಟ್ಟುಕೊಳ್ಳುತ್ತಿದೆ. ಕಳೆದ ವಾರ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಮೂರು ದಿನ ಮಳೆ ಜೋರು ದಾಖಲಾಗಿತ್ತು. ನಂತರ ಉತ್ತರ ಒಳನಾಡು ಜಿಲ್ಲೆಗಳು, ಇದೀಗ ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಲ್ಲಿ ಮೂರು ದಿನ ಮಳೆ ಆಗುವ ಸಂಭವವಿದೆ.
ಒಟ್ಟು ಮೂರು ದಿನ (ಅ.16) ಪೈಕಿ ಮೊದಲ ದಿನ ಶುಕ್ರವಾರದಂದು ಮಾತ್ರ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಆಗಲಿದೆ. ಹೀಗಾಗಿ ಇಲ್ಲಿನ ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದರ ಹೊರತು ಈ ಭಾಗದಲ್ಲಿ ಗಂಭೀರ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಇತರ ರಾಜ್ಯಕ್ಕಿಂತ ಕರ್ನಾಟಕದಲ್ಲೇ ಅಧಿಕ ಮಳೆ ನಿರೀಕ್ಷೆ
ದೇಶದ ಇತರ ರಾಜ್ಯಗಳಲ್ಲಿ ಮಳೆ ಅಬ್ಬರ ಕಡಿಮೆ ಇದೆ. ಬೇರೆ ರಾಜ್ಯಗಳಿಗಿಂತ ಕರ್ನಾಟದಲ್ಲೇ ಮುಂದಿನ ಮೂರು ದಿನ ಸಾಧಾರಣದಿಂದ ಅತ್ಯಧಿಕ ಮಳೆ ಬರುವ ಮುನ್ಸೂಚನೆ ದೊರೆತಿದೆ. ಅಂಡಮಾನ್ ನಿಕೋಬಾರ್, ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಝಾರ್ಖಂಡ, ಮಹಾರಾಷ್ಟ್ರ, ಛತ್ತಿಸ್ಗರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಲವೆ ಸಾಧಾರಣವಾಗಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಯೆಲ್ಲೋ ಅಲರ್ಟ್ ಪಡೆದ ಜಿಲ್ಲೆಗಳೆಷ್ಟು?
ರಾಜ್ಯದ ದಕ್ಷಿಣ ಒಳನಾಡಿನ ಬಹತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಈ ಭಾಗದದಲ್ಲಿ ಅಕ್ಟೋಬರ್ 16ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಅಬ್ಬರಿಸಲಿದೆ. ಈ ಕಾರಣಕ್ಕೆ ಇಷ್ಟು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ವಿವಿಧ ಜಿಲ್ಲೆಗಳ ಉಷ್ಣಾಂಶ, ತೇವಾಂಶದ ಮಾಹಿತಿ
ಬೆಂಗಳೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು ತೇವಾಂಶ 60ರಷ್ಟು ದಾಖಲಾಗಿದೆ. ಅಲ್ಲದೇ ಗಾಳಿಯ ವೇಗ ಗಂಟೆಗೆ 20 ಕಿ.ಮೀ ಕಂಡು ಬಂದಿದೆ. ಅದೇ ರೀತಿ ಬಾಗಲಕೋಟೆ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 71ರಷ್ಟು ತೇವಾಂಶ ಇದ್ದು, ಮಂಗಳೂರಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 71ರಷ್ಟು ತೇವಾಂಶ ಇದೆ. ಶಿವಮೊಗ್ಗ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 59ರಷ್ಟು ತೇವಾಂಶ ಇದ್ದು, ಮೈಸೂರಿನಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, ತೇವಾಂಶ 61ರಷ್ಟು ದಾಖಲಾಗಿದೆ. ಬಳ್ಳಾರಿಯಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 69ರಷ್ಟು ತೇವಾಂಶ ಇದೆ.
ರಾಯಚೂರು 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 63ರಷ್ಟು ತೇವಾಂಶ ಇದ್ದು, ಚಿತ್ರದುರ್ಗ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 77ರಷ್ಟು ತೇವಾಂಶ, ಕಲಬುರಗಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 73ರಷ್ಟು ತೇವಾಂಶ ಇದ್ದು, ಚಿಕ್ಕಮಗಳೂರು 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 70ರಷ್ಟು ತೇವಾಂಶ ದಾಖಲಾಗಿದೆ.