ಸಕಲೇಶಪುರ : ಮಾಜಿ ಶಾಸಕ ಬಿ.ಆರ್ ಗುರುದೇವ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ?
17 ವರ್ಷದಿಂದ ಪಕ್ಷಕ್ಕಾಗಿ ದುಡಿದರು ಸೂಕ್ತ ಸ್ಥಾನಮಾನ ನೀಡಿದರಿವುದರಿಂದ ಅಸಮಾಧಾನ
ಸಕಲೇಶಪುರ : ಬಿಜೆಪಿಯ ಹಿರಿಯ ಮುಖಂಡ ಮಾಜಿ ಶಾಸಕ ಬಿ.ಆರ್ ಗುರುದೇವ್ ಶೀಘ್ರದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವೇಳೆ ತಮ್ಮ ಬೆಂಬಲಿಗನಿಗೆ ಟಿಕೆಟ್ ನೀಡದೆ ಇರುವುದರಿಂದ ಮುನಿಸಿಕೊಂಡಿರುವ ಬಿ. ಆರ್ ಗುರುದೇವ್ ಶೀಘ್ರದಲ್ಲಿ ಕಾಂಗ್ರೆಸ್ ಸೇರುವ ಚಿಂತನೆಯಲ್ಲಿದ್ದಾರೆ ಎಂಬ ಮಾತುಗಳು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಒಂದು ತಿಂಗಳ ಹಿಂದೆ ನಡೆದ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಾಸನ ಜಿಲ್ಲಾ ಉಸ್ತುವಾರಿ ಡಿ.ಕೆ ಸುರೇಶ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಗುರುದೇವ್ ಮನೆಗೆ ಭೇಟಿ ನೀಡಿದ್ದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರಮುಡಿ ಚಂದ್ರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್ ಗುರುದೇವ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇಂದು ಮುಂಜಾನೆ ಕೂಡ ಗುರುದೇವ್ ರವರು ಆಪ್ತರೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಳೆದ 17 ವರ್ಷಗಳಿಂದ ಬಿಜೆಪಿಯಲ್ಲಿದ್ದು ಸೂಕ್ತ ಸ್ಥಾನಮಾನ ದೊರಕಿಲ್ಲ ಎಂಬ ಅಸಮಾಧಾನವಿದೆ ಎನ್ನಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ವೀರಶೈವ ಸಮಾಜದ ಮುಖಂಡರಾಗಿ ಕಾರ್ಯನಿರ್ವಹಿಸಿದ್ದರು ಸಹ ಮಾಜಿ ಶಾಸಕರ ಶಕ್ತಿ ಏನೆಂಬುದನ್ನು ಬಿಜೆಪಿ ಅರಿಯಲು ಇದುವರೆಗೂ ಸಾಧ್ಯವಾಗಿಲ್ಲ ಎಂಬುದು ಗುರುದೇವ್ ಆಪ್ತರ ಮಾತಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇತ್ತೀಚೆಗಷ್ಟೆ ಬಿಜೆಪಿ ಹಾಗೂ ಜೆಡಿಎಸ್ ನಿಂದ 25ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.