ಸಕಲೇಶಪುರ : ಕುದರಂಗಿ ವೀರಭದ್ರಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಿಂದ ಆಚರಣೆ
ಕುದರಂಗಿ ಜಾತ್ರಾ ಮಹೋತ್ಸವದಲ್ಲಿ ಮತ ಬೇಟೆಗಿಳಿದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು.
ಸಕಲೇಶಪುರ: ತಾಲ್ಲೂಕಿನ ಅರೆಕೆರೆ ಮಂದೆ ಸುಳ್ಳಕ್ಕಿ ಗ್ರಾಮದ ಇತಿಹಾಸ ಪ್ರಸಿದ್ದ ಕುದರಂಗಿ ವೀರಭದ್ರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ರಥೋತ್ಸವದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಮೂಲ ಮೂರ್ತಿ ಪೂಜಾ ಕಾರ್ಯ ನೆರವೇರಿದ ನಂತರ 8;30 ಕ್ಕೆ ಪುಷ್ಪ ರಥೋತ್ಸವ ನೆರವೇರಿತು.ಮದ್ಯಾಹ್ನ 12:30ಕ್ಕೆ ಬ್ರಹ್ಮ ರಥೋತ್ಸವ ನೆರವೇರಿಸಲಾಯಿತು. ಸಾವಿರಾರು ಭಕ್ತರು ಜಾತ್ರೆಗೆ ಅಗಮಿಸಿದ್ದರಿಂದ ಗತ ವೈಭವ ಹಿಂತಿರುಗಿ ಬಂದಂತೆ ಭಾಸವಾಗುತ್ತಿತ್ತು. ಐತಿಹಾಸಿಕ ಈ ಉತ್ಸವದಲ್ಲಿ ಅರೆಕೆರೆ, ಜಾನೆಕೆರೆ, ಸುಳ್ಳಕ್ಕಿ, ಬ್ಯಾಕರವಳ್ಳಿ,ಸತ್ತಿಗಾಲ, ಇಬ್ಬಡಿ,ಕಾಮನಹಳ್ಳಿ, ನಡೆಹಳ್ಳಿ, ನಲ್ಲುಲ್ಲಿ ಶುಕ್ರವಾರ ಸಂತೆ ,ಶಾಂತಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಹೊರ ಜಿಲ್ಲೆಗಳ ಭಕ್ತರು ಸಂಭ್ರಮದಿಂದ ಪಾಲ್ಗೊಂಡು ರಥೋತ್ಸವದ ವೇಳೆ ರಥಕ್ಕೆ ಬಾಳೆಹಣ್ಣು ಎಸೆದು ಹರಕೆ ,ಹವನಗಳನ್ನು ಅರ್ಪಿಸಿದರು.
ನಾಲ್ಕು ದಿನಗಳವರೆಗೆ ನಡೆಯುವ ವೀರಭದ್ರಸ್ವಾಮಿ ಉತ್ಸವ ಭಾನುವಾರದಿಂದ ಪ್ರಾರಂಭವಾಗಿದ್ದು ದೇವಸ್ಥಾನದಲ್ಲಿ ವಿಶೇಷ ಹೋಮ ಹವನ ನಡೆಸಲಾಯಿತು.ಬುಧುವಾರ ಪಲ್ಲಕ್ಕಿ ಉತ್ಸವ ಹಾಗೂ ಈಡುಗಾಯಿ ಸಮರ್ಪಣೆ ಮತ್ತು ಜಾತ್ರಾ ಮಹೋತ್ಸವದ ಕೊನೆದಿನವಾದ ಗುರುವಾರ ಸ್ವಾಮಿಯವರಿಗೆ ಅಮೃತಾ ಸ್ನಾನ ನೆರವೇರಲಿದೆ.
ಜಾತ್ರಾ ಮಹೋತ್ಸವದಲ್ಲಿ ಜೆಡಿಎಸ್ ಶಾಸಕ ಎಚ್ ಕೆ ಕುಮಾರಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡದಿಣ್ಣೆ ಸ್ವಾಮಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಕಾಂಗ್ರೆಸ್ ಅಭ್ಯರ್ಥಿ ಮುರುಳಿ ಮೋಹನ್ ಪತ್ನಿ ನಂದಿನಿ ಮುರಳಿ ಮೋಹನ್ ಸೇರಿದಂತೆ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ, ಸಮಾಜ ಸೇವಕಿ ಅಕ್ಷತ ಕೋಡಗಲವಾಡಿ ಸೇರಿದಂತೆ ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತಾದಿಗಳು ನೆರೆದಿದ್ದರು.