ಸಕಲೇಶಪುರ : ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಬಿಗ್ ಮೀಟಿಂಗ್.
ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನ ವೀರಶೈವ ಸಮಾಜಕ್ಕೆ ನೀಡುವಂತೆ ಅಗ್ರಹ.
ಸಕಲೇಶಪುರ: ಭಾರತೀಯ ಜನತಾ ಪಾರ್ಟಿಗೆ ವೀರಶೈವ ಸಮಾಜದ ಕೊಡುಗೆ ಅಪಾರವಾಗಿದ್ದು. ಸಮಾಜದ ಬಹುಪಾಲು ಮತದಾರರು ಬಿಜೆಪಿ ಪಕ್ಷವನ್ನೇ ಬೆಂಬಲಿಸುತ್ತ ಬಂದಿದ್ದಾರೆ.
ಆದರೆ ಸ್ಥಳೀಯವಾಗಿ ಪಕ್ಷದಲ್ಲಿ ವೀರಶೈವ ಸಮಾಜಕ್ಕೆ ಪ್ರಬಲ ಹುದ್ದೆಗಳನ್ನು ದೊರಕದಂತೆ ಮಾಡಲಾಗುತ್ತಿದೆ ಎಂಬ ಆರೋಪ ವೀರಶೈವ ಮುಖಂಡರ ಸಭೆಯಲ್ಲಿ ಕೇಳಿ ಬಂದಿತು.
ಭಾನುವಾರ ಬಿಜೆಪಿ ಮುಖಂಡರೋರ್ವರ ನಿವಾಸದಲ್ಲಿ ನಡೆದ ವೀರಶೈವ ಮುಖಂಡರ ಸಭೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಈ ಹಿಂದೆ ಒಕ್ಕಲಿಗ ಸಮಾಜಕ್ಕೆ ನೀಡಲಾಗಿದ್ದು ಕಾರಣಾಂತರಗಳಿಂದ ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ ತಾಲೂಕು ಅಧ್ಯಕ್ಷ ಹುದ್ದೆ ಖಾಲಿ ಇದೆ. ಚುನಾವಣೆಯನ್ನು ಯಾರ ನೇತೃತ್ವದಲ್ಲಿ ಎದುರಿಸುವುದೆಂಬ ಗೊಂದಲವಿದ್ದು ತಾಲೂಕು ಬಿಜೆಪಿಯಲ್ಲಿ ನಾವಿಕನಿಲ್ಲದ ದೋಣಿಯಂತಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಅಧ್ಯಕ್ಷ ಸ್ಥಾನವನ್ನು ವೀರಶೈವ ಜನಾಂಗಕ್ಕೆ ನೀಡಿದಲ್ಲಿ ಬಿಜೆಪಿ ಪಕ್ಷಕ್ಕೆ ವೀರಶೈವರು ಹೆಚ್ಚಿನ ಮತಗಳನ್ನು ನೀಡುವಲ್ಲಿ ಅನುಮಾನವಿಲ್ಲ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಒಕ್ಕಲಿಗರಿಗೆ ಮಣೆ ಹಾಕಿದ್ದು ಈ ನಿಟ್ಟಿನಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನವನ್ನು ವೀರಶೈವರಿಗೆ ನೀಡಬೇಕೆಂಬ ಅಭಿಪ್ರಾಯ ಓಕ್ಕೊರಲಿನಿಂದ ಕೇಳಿ ಬಂದಿತು.
ಸಭೆಯಲ್ಲಿ ವೀರಶೈವ ಸಮಾಜದ ಜಿಲ್ಲಾ ಮುಖಂಡರುಗಳಾದ ಕಟ್ಟಾಯ ಶಿವಕುಮಾರ್, ನಾಗೇಶ್, ತಾಲೂಕು ಮುಖಂಡರುಗಳಾದ ನರೇಶ್, ಹುರುಡಿ ಅರುಣ್ ಕುಮಾರ್, ಗುಲಗಳಲೆ ಮೋಹನ್, ಶಶಿಕುಮಾರ್, ನೇತ್ರಾವತಿ ಮಂಜುನಾಥ್ ಸೇರಿದಂತೆ ಇನ್ನು ಅನೇಕರು ಭಾಗಿಯಾಗಿದ್ದರು.