ಕಾಡಿಚ್ಚಿನಿಂದ ಮೃತಪಟ್ಟ ಸುಂದರೇಶ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ.
ಅಧಿವೇಶನದ ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಸದಸ್ಯ ಹೆಚ್.ಕೆ.ಕುಮಾರಸ್ವಾಮಿ ಅವರು ಮಾಡಿದ ಪ್ರಸ್ತಾಪಕ್ಕೆ ಸ್ಪಂದಿಸಿದ ಸಚಿವರು
ಬೆಂಗಳೂರು, ಫೆ. 21- ಸಕಲೇಶಪುರ ಅರಣ್ಯದಲ್ಲಿ ಸಂಭವಿಸಿದ ಕಾಡಿಚ್ಚಿನಿಂದಾಗಿ ಮೃತಪಟ್ಟಿರುವ ಸುಂದರೇಶ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಾಗಿದೆ ಹಾಗೂ ಮೃತರ ಪತ್ನಿಗೆ ಸರ್ಕಾರಿ ಕೆಲಸ ನೀಡಲಾಗುವುದು ಎಂದು ಸಚಿವ ಕಾನೂನು ಮಾಧುಸ್ವಾಮಿ ವಿಧಾನಸಭೆಯಲ್ಲಿಂದು ಭರವಸೆ ನೀಡಿದರು.
ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಸದಸ್ಯ ಹೆಚ್.ಕೆ.ಕುಮಾರಸ್ವಾಮಿ ಅವರು ಮಾಡಿದ ಪ್ರಸ್ತಾಪಕ್ಕೆ ಸ್ಪಂದಿಸಿದ ಸಚಿವರು, ಸಂಕಷ್ಟಕ್ಕೀಡಾಗಿರುವ ಕಾಡಿಚ್ಚಿನಿಂದ ಮೃತಪಟ್ಟ ಸುಂದರೇಶ್ ಕುಟುಂಬದ ಬೆಂಬಲಕ್ಕೆ ಸರ್ಕಾರ ನಿಂತಿದೆ. ಕಾಡಿನ ಬೆಂಕಿ ಅವಘಡಗಳಲ್ಲಿ ಮೃತಪಟ್ಟವರಿಗೆ ನೀಡುತ್ತಿದ್ದ 30 ಲಕ್ಷ ರೂ.ಪರಿಹಾರದ ಬದಲಿಗೆ 50 ಲಕ್ಷ ರೂ. ನೀಡಲಾಗಿದೆ ಎಂದರು.
ಕಾಡ್ಗಚ್ಚಿನಲ್ಲಿ ಗಾಯಗೊಂಡ ಮತ್ತೊಬ್ಬರಿಗೆ ಬೆ೦ಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕುಮಾರಸ್ವಾಮಿ ಅವರು, ರಕ್ಷಿತ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾಡಿಚ್ಚಿನಲ್ಲಿ ಫಾರೆಸ್ಟ್ ಗಾರ್ಡ್ ಸುಂದರೇಶ್ ಮೃತಪಟ್ಟಿದ್ದರಿಂದ ಅವರ ಕುಟುಂಬ ‘ತುಂಬಾ ಕಷ್ಟದಲ್ಲಿದೆ. ಕಾಡಿಚ್ಚಿನ ಸಂದರ್ಭದಲ್ಲಿ 5 ಜನರು ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.