ಪುರಸಭಾ ವ್ಯಾಪ್ತಿಯಲ್ಲಿ ಕಾಡಾನೆ ಕಾಟ: ಆತಂಕದಲ್ಲಿ ಜನ
ಸಕಲೇಶಪುರ: ಪಟ್ಟಣದ ಗಡಿಭಾಗದಲ್ಲಿ ಕಳೆದ ಒಂದು ವಾರದಿಂದ ಮಕನ ಕಾಡಾನೆ ಸಂಚರಿಸುತ್ತಿದ್ದು ಇದರಿಂದ ಜನಸಾಮಾನ್ಯರು ಆತಂಕಕ್ಕೆ ಈಡಾಗಿದ್ದಾರೆ.
ಪಟ್ಟಣದ ವಾರ್ಡ್‌ನಂ 22 ಹಾಗೂ 23, ಕುಡುಗರಹಳ್ಳಿ ಹಾಗೂ ಸಂತೋಷ್ ನಗರ ಬಡಾವಣೆಯಲ್ಲಿ ಮಕನ ಕಾಡಾನೆ ಕಳೆದ ಒಂದು ವಾರದಿಂದ ಸಂಚರಿಸುತ್ತ ದಾಂದಲೆ ನಡೆಸುತ್ತಿದ್ದು ಇದರ ಉಪಟಳ ತಡೆಯಲಾರದೆ ಅಲ್ಲಿನ ನಿವಾಸಿಗಳು ಆತಂಕಕ್ಕೆ ಈಡಾಗಿದ್ದಾರೆ. ಮಕನ ಕಾಡಾನೆಯ ಹಾವಳಿಯಿಂದ ಸಂತೋಷ್ ನಗರದಲ್ಲಿ ಹಲವು ಕಾಫಿ ತೋಟಗಳು ಹಾನಿಗೀಡಾಗಿದೆ. ವಿಶ್ವನಾಥ್ ಎಂಬುವರ ಮನೆಯ ಗಾಜನ್ನು ಮಕನ ಕಾಡಾನೆ ಒಡೆದು ಹಾಕಿದೆ. ಕುಡುಗರಹಳ್ಳಿ ಬಡಾವಣೆಯಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿರವರ ಕಾಫಿ ತೋಟ ಸಹ ಇದ್ದು ಅಲ್ಲೂ ಸಹ ಕಾಡಾನೆ ವ್ಯಾಪಕ ದಾಂದಲೆ ನಡೆಸಿರುತ್ತದೆ. ಬೋಜೆಗೌಡ, ಸುದೀಶ್, ಚಿನ್ನಸ್ವಾಮಿ ಸೇರಿದಂತೆ ಇನ್ನು ಹಲವು ಮಂದಿಯ ಕಾಫಿ ತೋಟಗಳಲ್ಲಿ ಕಾಡಾನೆ ಬಾಳೆ, ಬೈನೆ, ಕಬ್ಬು ಬೆಳೆಗಳನ್ನು ಸಂಪೂರ್ಣವಾಗಿ ಹಾನಿ ಮಾಡಿದೆ. ಇಲ್ಲೆ ಸಮೀಪದ ಮೌಂಟೈನ್ ಕೇವ್ ಲೇಔಟ್‌ನಲ್ಲಿ 3 ಮನೆಗಳಿದ್ದು ಇದೀಗ ಕಾಡಾನೆ ಅಲ್ಲೆ ಸಮೀಪ ಬೀಡು ಬಿಟ್ಟಿದ್ದು ಆರ್.ಆರ್.ಟಿ ಸಿಬ್ಬಂದಿಗಳು ಸ್ಥಳದಲ್ಲೆ ಬೀಡು ಬಿಟ್ಟಿದ್ದಾರೆ. ಮಕನ ಕಾಡಾನೆ ಪುರಸಭೆ ವ್ಯಾಪ್ತಿಯಲ್ಲಿ ದಾಂದಲೆ ನಡೆಸುತ್ತಿರುವುದು ಆತಂಕಕಾರಿಯಾಗಿದೆ. ಈ ಹಿಂದೆ ಮಕನ ಕಾಡಾನೆಯನ್ನು ಹಿಡಿದು ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಟ್ಟು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡ ಬಂದ ಮಕನ ಕಾಡಾನೆ ಪುನ: ಹಲಸುಲಿಗೆ ಸುತ್ತಮುತ್ತ ದಾಂದಲೆ ನಡೆಸುತ್ತಿದ್ದು ಇದೀಗ ಪುರಸಭಾ ವ್ಯಾಪ್ತಿಯಲ್ಲಿ ತಿರುಗಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.