Tuesday, January 28, 2025
Homeಸುದ್ದಿಗಳುದೇಶ10 ವರ್ಷಕ್ಕೊಮ್ಮೆ ಆಧಾರ್ ದಾಖಲೆ ಪರಿಷ್ಕರಿಸಿ

10 ವರ್ಷಕ್ಕೊಮ್ಮೆ ಆಧಾರ್ ದಾಖಲೆ ಪರಿಷ್ಕರಿಸಿ

ನವದೆಹಲಿ: ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್​ಗೆ ಸಂಬಂಧಿಸಿದ ನಿಯಮದಲ್ಲಿ ಕೇಂದ್ರ ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದ್ದು, ಪ್ರತಿ 10 ವರ್ಷಕ್ಕೊಮ್ಮೆ ಸಾರ್ವಜನಿಕರು ದಾಖಲೆಗಳನ್ನು ಅಪ್​ಡೇಟ್ ಮಾಡಬೇಕಿದೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆಧಾರ್ ಕಾರ್ಡ್​ನಲ್ಲಿನ ಮಾಹಿತಿ, ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಅಗತ್ಯವಾಗಿದೆ ಎಂದು ಸರ್ಕಾರ ಹೇಳಿದೆ. ಆಧಾರ್ ಸಂಖ್ಯೆ ಪಡೆದು 10 ವರ್ಷ ಪೂರ್ಣಗೊಂಡಿದ್ದರೆ ಅಗತ್ಯ ದಾಖಲೆಗಳನ್ನು ನೀಡಿ ಮಾಹಿತಿ ಅಪ್​ಡೇಟ್ ಮಾಡಬೇಕಿದೆ. ಆದರೆ, ಹೊಸದಾಗಿ ಆಧಾರ್ ಪಡೆಯುವ ಅಗತ್ಯವಿಲ್ಲ.

ಕೆಲಸ, ವೃತ್ತಿ ಜೀವನ ಇನ್ನಿತರ ಕಾರಣಕ್ಕೆ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗಿ ನೆಲೆಸಿರುತ್ತಾರೆ. 10 ವರ್ಷಗಳ ನಂತರ ಆಧಾರ್ ಕಾರ್ಡ್​ನಲ್ಲಿರುವ ಫೋಟೋ ಮೂಲಕ ವ್ಯಕ್ತಿಯ ಗುರುತು ಪತ್ತೆ ಮಾಡುವುದೂ ಕಷ್ಟಕರ. ವಿವಿಧ ಯೋಜನೆಗಳ, ವ್ಯವಹಾರಗಳಿಗೆ ಆಧಾರ್ ಅಗತ್ಯವಾಗಿರುವ ಕಾರಣ ಅದರಲ್ಲಿನ ಮಾಹಿತಿ ಸಮರ್ಪಕವಾಗಿ ಅಪ್​ಡೇಟ್ ಆಗಿರಬೇಕಾಗುತ್ತದೆ. ಜತೆಗೆ, ಆಧಾರ್ ಡೇಟಾಬೇಸ್ ಸಂಗ್ರಹದಲ್ಲೂ ವ್ಯಕ್ತಿಯ ಕುರಿತು ಇತ್ತೀಚಿನ ಮಾಹಿತಿ ದಾಖಲೆಗೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಧಾರ್ ಮಾಹಿತಿ ಪರಿಷ್ಕರಣೆಗೆ ಮುಂದಾಗಿದೆ. ಈವರೆಗೆ 134 ಕೋಟಿ ಜನರಿಗೆ ಆಧಾರ್ ಸಂಖ್ಯೆ ವಿತರಣೆಯಾಗಿದೆ.

ಕಳೆದ ವರ್ಷ 16 ಕೋಟಿಗೂ ಹೆಚ್ಚು ಜನರು ಮಾಹಿತಿಗಳನ್ನು ಅಪ್​ಡೇಟ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಆಧಾರ್ ದೃಢೀಕರಣ ಬಳಕೆ ಮಾಡಲಾಗುತ್ತದೆ. ನೇರ ನಗದು ವರ್ಗಾವಣೆ, ಪಡಿತರ, ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳು ಆಧಾರ್ ಸಂಖ್ಯೆಯ ಜೋಡಣೆಯ ಮೂಲಕವೇ ಸರ್ಕಾರದ ನೆರವು ಪಡೆಯುತ್ತಿದ್ದಾರೆ.     

ಆನ್​ಲೈನ್​ನಲ್ಲೇ ಪ್ರಕ್ರಿಯೆ

ಪ್ರತಿ ಆಧಾರ ಕಾರ್ಡ್​ನಲ್ಲಿ ಅದನ್ನು ನೀಡಿರುವ ದಿನಾಂಕ ನಮೂದಾಗಿ ರುತ್ತದೆ. ಅದರನ್ವಯ 10 ವರ್ಷ ಆಗಿದ್ದರೆ, ದಾಖಲೆಗಳನ್ನು ಅಪ್​ಡೇಟ್ ಮಾಡಿಕೊಳ್ಳಬಹುದು. ಆನ್​ಲೈನ್​ನಲ್ಲಿ ಮೈ ಆಧಾರ್ ಪೋರ್ಟಲ್ ಅಥವಾ ಮೈ ಆಧಾರ್ ಆಪ್​ನಲ್ಲಿ ‘ಅಪ್​ಡೇಟ್ ಡಾಕ್ಯುಮೆಂಟ್’ ಎಂಬ ಹೊಸ ಫೀಚರನ್ನು ಪ್ರಾಧಿಕಾರ ನೀಡಿದೆ. ಇಲ್ಲಿ ಸಾರ್ವಜನಿಕರು ಇತ್ತೀಚಿನ ದಾಖಲೆಗಳನ್ನು ಅಪ್​ಲೋಡ್ ಮಾಡಿ, ಮಾಹಿತಿ ಪರಿಷ್ಕರಣೆ ಮಾಡಬಹುದು. ತಿದ್ದುಪಡಿಗಳನ್ನು ಮಾಡಲು ಎಡಿಟ್ ಎಂಬ ಆಯ್ಕೆಯನ್ನೂ ನೀಡಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ತಿದ್ದುಪಡಿಯನ್ನು ಖಚಿತಪಡಿಸಿಕೊಳ್ಳಬೇಕು. ಅಥವಾ ಆಧಾರ್ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಈ ಪ್ರಕ್ರಿಯೆ ಪೂರೈಸಬಹುದು.

ಯಾವ ದಾಖಲೆ?

ಫೋಟೋ ಹೊಂದಿರುವ ಗುರುತಿನ ಪತ್ರ ಹಾಗೂ ವಿಳಾಸವನ್ನು ಅಪ್​ಡೇಟ್ ಮಾಡುವಂತೆ ಆಧಾರ್ ಪ್ರಾಧಿಕಾರ ಕೋರಿದೆ. ಮತದಾರರ ಚೀಟಿ, ಪ್ಯಾನ್ ಕಾರ್ಡ್ ಅಥವಾ ಯಾವುದೇ ಅಧಿಕೃತ ದಾಖಲೆಗಳನ್ನು ನೀಡುವ ಮೂಲಕ ಮಾಹಿತಿ ಪರಿಷ್ಕರಣೆ ಮಾಡಬಹುದು. ಆದರೆ, ಬಯೊಮೆಟ್ರಿಕ್ ಮಾಹಿತಿಗಳನ್ನು ಮತ್ತೆ ನೀಡುವ ಅಗತ್ಯವಿಲ್ಲ.

ನಕಲಿ ತಡೆಗೆ ಅನುಕೂಲ

ದೇಶದಲ್ಲಿ ಲಕ್ಷಾಂತರ ನಕಲಿ ಆಧಾರ್ ಕಾರ್ಡ್​ಗಳಿವೆ ಎಂಬ ಆರೋಪ ಇದೆ. ಅಕ್ರಮ ವಲಸಿಗರಿಗೂ ಅಕ್ರಮವಾಗಿ ಆಧಾರ್ ಕಾರ್ಡ್ ಸಿಗುತ್ತಿದೆ. ಗುರುತಿನ ಚೀಟಿ ಹಾಗೂ ವಿಳಾಸದ ದಾಖಲೆಗಳನ್ನು ಅಪ್​ಡೇಟ್ ಮಾಡು ವುದು ಕಡ್ಡಾಯ ಮಾಡಿದರೆ ನಕಲಿ ಆಧಾರ್ ಹಾವಳಿಗೂ ತುಸು ಕಡಿವಾಣ ಬೀಳುವ ಸಾಧ್ಯತೆ ಇದೆ.

RELATED ARTICLES
- Advertisment -spot_img

Most Popular