ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ರಕ್ಷಿತಾಬಾಯಿ ಅವರ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ಘೋಷಣೆಯಾಗಿದೆ. ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ., ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ., ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಶೇಖರ್ ನಾಯ್ಕ ಮತ್ತು ಲಕ್ಷ್ಮೀಬಾಯಿ ದಂಪತಿಯ ಪುತ್ರಿ ಎಸ್.ಎಚ್. ರಕ್ಷಿತಾಳ ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಕುಟುಂಬಸ್ಥರು ನೋವಿನಲ್ಲೂ ಮಗಳ ಬಹುಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದರು.
ಚಿಕ್ಕಮಗಳೂರಿನ ಬಸವನಹಳ್ಳಿಯ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ರಕ್ಷಿತಾ, ಸೆ.18ರಂದು ಚಿಕ್ಕಮಗಳೂರಿನ ಸಂಬಂಧಿಕರ ಮನೆಗೆ ಬಸ್ನಲ್ಲಿ ಹೋಗುವಾಗ ಮಾರ್ಗಮಧ್ಯೆ ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಮಿದುಳು ನಿಷ್ಕ್ರಿಯಗೊಂಡಿದೆ, ಇನ್ನು ಮಗಳು ಬದುವುದಿಲ್ಲ ಎಂಬ ಸುದ್ದಿ ಕೇಳಿ ಕಂಗಾಲದ ಪಾಲಕರು ಶುಕ್ರವಾರ ಮಗಳ ಕಣ್ಣು, ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್ ದಾನ ಮಾಡಿದ್ದರು.
ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ನನ್ನ ತಂಗಿ ದೈಹಿಕವಾಗಿ ಇಲ್ಲದಿದ್ದರೂ ಅವಳ ಅಂಗಾಂಗಳು ಬೇರೆಯವರಿಗೆ ಜೀವ ನೀಡಲಿವೆ. ಆ ಮೂಲಕ ಅವಳು ಇದ್ದಾಳೆ ಎಂದು ತೃಪ್ತಿಪಟ್ಟುಕೊಳ್ಳುತ್ತೇವೆ ಎಂದು ರಕ್ಷಿತಾಳ ಅಣ್ಣ ಅಭಿನಂದನ್ ಕಣ್ಣೀರಿಟ್ಟಿದ್ದರು. ಅಷ್ಟೇ ಅಲ್ಲ, ರಕ್ಷಿತಾ ಓದುತ್ತಿದ್ದ ಕಾಲೇಜು ಆವರಣದಲ್ಲಿ ಕೆಲ ಕಾಲ ಆಕೆಯ ಪಾರ್ಥಿವಶರೀರವನ್ನ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ರಕ್ಷಿತಾಳ ಅಣ್ಣ, ತಂಗಿಗಾಗಿ ಕಣ್ಣೀರಿಡುತ್ತಾ ಹಾಡು ಹೇಳಿದ್ದರು. ಇಡೀ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೂ ಕಣ್ಣೀರ ವಿದಾಯ ಹೇಳಿದ್ದರು. ಈ ದೃಶ್ಯ ನೋಡಿದ ನಾಡಿನ ಜನರೂ ಭಾವುಕರಾದರು. ರಕ್ಷಿತಾಳ ಸಾವಿಗೆ ಕೋಟ್ಯಂತರ ಜನ ಕಂಬನಿ ಮಿಡಿದಿದ್ದರು