ಹಾಸನ : ಜಿಲ್ಲೆಯಲ್ಲಿರುವ ನಕಲಿ ವೈದ್ಯರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅರ್ಚನಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಖಾಸಗಿ ವೈದ್ಯರ ಸಂಸ್ಥೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿರುವ ನಕಲಿ ವೈದ್ಯರನ್ನು ಪತ್ತೆ ಮಾಡಿ, ಕಾನೂನಿನ ಕೈಗೆ ಒಪಿಸಬೇಕಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಸರಕಾರಿ ಪ್ರಮಾಣಪತ್ರ ಹಾಗೂ ಅನುಮತಿಯಿಲ್ಲದೇ ವೈದ್ಯ ವೃತ್ತಿ ಕೈಗೊಂಡು ಜನ ಸಾಮಾನ್ಯರ ಆರೋಗ್ಯ ಹಾಗೂ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ನಕಲಿ ವೈದ್ಯರನ್ನು ಮಟ್ಟ ಹಾಕಲು ಇಂದಿನಿಂದಲೇ ಕಾರ‌್ಯಾಚರಣೆ ಪ್ರಾಂಭಿಸಿ ಎಂದು ಅವರು ತಿಳಿಸಿದರು.
ಆಸ್ಪತ್ರೆಗಳಲ್ಲಿ ಸಂಗ್ರಹಿಸಲಾಗುವ ಜೈವಿಕ ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ಸರಿಯಾದ ಸಮಯಕ್ಕೆ ಮಾಡಲು ಸೂಚಿಸಿದರಲ್ಲದೇ ವಿಳಂಭ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ಸಲುವಾಗಿ 50ಕ್ಕಿಂತ ಹೆಚ್ಚು ಹಾಸಿಗೆ ಸಾಮರ್ಥ್ಯವುಳ್ಳ ಖಾಸಾಗಿ ಆಸ್ಪತ್ರೆಯವರು ಆಕ್ಸಿಜನ್ ಘಟಕವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸೂಚಿಸಿದರು.

 
                                    
